ಷಾ ನವಾಜ್ ಖಾನ್ ಷಾ
	ಪರ್ಷಿಯನ್ ರಾಜ ವಂಶಸ್ಥ. ಇವನ ತಂದೆ ಅಬ್ದುಲ್ಲಾಖಾನ್. ಷಾಜಹಾನ್ ಚಕ್ರವರ್ತಿಯ ಆಳಿಕೆಯ ಕಾಲದಲ್ಲಿ ಗುಜರಾತಿನ ಗವರ್ನರ್ ಆಗಿದ್ದ. ಅಬ್ದುಲ್ಲಾಖಾನ್ 1616ರಲ್ಲಿ ನಿಜಾಮಷಾಹೀ ರಾಜ್ಯದ ಮೇಲೆ ಕೈಗೊಂಡ ದಂಡಯಾತ್ರೆಯಲ್ಲಿ ನವಾಜ್‍ಖಾನ್ ಭಾಗವಹಿಸಿದ್ದ. ಅವರನ್ನು ಕಿರ್ಕಿಗೆ ಸಮೀಪದ ರೋಸಲ್‍ಘರ್ ಎಂಬಲ್ಲಿ ಸೋಲಿಸಿದ. ಅನಂತರ ಕಿರ್ಕಿಯನ್ನು ಪ್ರವೇಶಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗಿದ. ಆದರೆ ಸೋತ ನಿಜಾಮ ಷಾಹಿಗಳನ್ನು ಇವನು ಹಿಂಸಿಸಲಿಲ್ಲ. ಅನಂತರದಲ್ಲಿ ಷಾಜಹಾನನನ್ನು ದಖ್ಖನ್ನಿಗೆ ಆಮಂತ್ರಿಸಿದ ದಖ್ಖನ್ನೀ ಮುಖಂಡರುಗಳಲ್ಲಿ ಇವನು ಮತ್ತು ಇವನ ತಂದೆಯೂ ಸೇರಿದ್ದರು. ಷಾಜಹಾನ್ ಇವರ ಆಮಂತ್ರಣದ ಮೇರೆಗೆ ಮಾರ್ಚ್ 6ರಂದು ಬರ್‍ಹಾನ್‍ಪುರಕ್ಕೆ ಬಂದ. ಆದಿಲ್‍ಷಾ ಮತ್ತು ಮಲ್ಲಿಕ್ ಅಂಬರ್ ಇಬ್ಬರೂ ಷಾಜಹಾನನ ಸಾರ್ವಭೌಮತ್ವ ಒಪ್ಪಿಕೊಂಡರು. ಅಬ್ದುಲ್ಲಾಖಾನ್ ಮತ್ತು ಇವನನ್ನು ದಖ್ಖನ್ನಿನ ಮೇಲ್ವಿಚಾರಣೆ ನೋಡಿಕೊಳ್ಳಲು ಷಾಜಹಾನ್‍ನು ತನ್ನ ಪ್ರತಿನಿಧಿಗಳನ್ನಾಗಿ ನೇಮಿಸಿ ದೆಹಲಿಗೆ ಹಿಂದಿರುಗಿದ. ದಖ್ಖನ್ನಿನಲ್ಲಿ ತನ್ನ ಒಡೆತನಕ್ಕೆ ನವಾಜ್‍ಖಾನನ ಸಹಾಯ ಅವಶ್ಯವೆಂದು ಭಾವಿಸಿದ್ದ ಆತ ತರುವಾಯದಲ್ಲಿ ಈತನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ತನ್ನ ಮೂರನೆಯ ಹೆಂಡತಿಯಾಗಿ ವಿವಾಹವಾದ (1617 ಆಗಸ್ಟ್ 23). ಷಾಜಹಾನನ ಮರಣಾನಂತರ ಸಿಂಹಾಸನಕ್ಕಾಗಿ ಅವನ ಮಕ್ಕಳಾದ ದಾರ ಮತ್ತು ಔರಂಗಜೇಬರಲ್ಲಿ ಪ್ರಬಲ ಸ್ಪರ್ಧೆ ಏರ್ಪಟ್ಟಾಗ ನವಾಜ್ ಖಾನನು ದಾರನಿಗೆ ಮುಖ್ಯ ಸಲಹೆಗಾರನಾಗಿದ್ದ. ಆದರೆ ಕೆಲವೇ ಸಮಯದಲ್ಲಿ ದಾರನ ಪಕ್ಷತೊರೆದು ಔರಂಗಜೇಬನ ಪಕ್ಷ ಸೇರಿ ದಾರನ ಯೋಜನೆಗಳೆಲ್ಲವನ್ನೂ ಅವನಿಗೆ ತಿಳಿಸಿದನೆಂದು ಇತಿಹಾಸಕಾರ ಬರ್ನಿಯರ್ ಅಭಿಪ್ರಾಯಪಟ್ಟಿದ್ದಾನೆ. ಬಹುಶಃ ಇವನು ತನ್ನ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ದಿಲಾರಸ್‍ಬಾನುಬೇಗಂ ಎಂಬವಳನ್ನು 1637 ಮೇ 8ರಂದು ಔರಂಗಜೇಬನಿಗೆ ಕೊಟ್ಟು ವಿವಾಹ ಮಾಡಿದುದರಿಂದ ಹೀಗೆ ಪಕ್ಷಾಂತರ ಮಾಡಿರಬಹುದೆಂಬುದು ಬರ್ನಿಯರ್‍ನ ಅಭಿಪ್ರಾಯ. ಇವನು ಔರಂಗಜೇಬನ ಆಳಿಕೆಯ ಮೊದಲ ವರ್ಷಗಳಲ್ಲಿ ಗುಜರಾತಿನ ಸುಬೇದಾರನಾಗಿದ್ದ ಔರಂಗಜೇಬನ ಕಿರಿಯ ಸೋದರನಾದ ಮುರಾದ 1648ರಲ್ಲಿ ದಖ್ಖನ್ನಿನ ನಾಲ್ಕು ಪ್ರಾಂತಗಳಿಗೆ ವೈಸ್‍ರಾಯ್ ಆಗಿ ನೇಮಿಸ ಲ್ಪಟ್ಟಾಗ ಅವನಿಗೆ ಮುಖ್ಯಮಂತ್ರಿಯಾಗಿ ಇವನು ನೇಮಿಸಲ್ಪಟ್ಟ. ಸಮಕಾಲೀನ ಇತಿಹಾಸಕಾರ ಕಾಫಿಖಾನ್ ಇದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ. ಔರಂಗಜೇಬನ ವಿರುದ್ಧ ದಾರ ಸೈನ್ಯಸಮೇತ ಹೋದಾಗ ಇವನು ದಾರನ ಆಂತರ್ಯದ ವ್ಯಕ್ತಿಯಾಗಿದ್ದನೆಂದೂ ದಾರ ಮತ್ತು ಔರಂಗಜೇಬನ ಸೈನ್ಯಗಳಿಗೆ 1658-59ರಲ್ಲಿ ನಡೆದ ಅಜ್ಮೀರ್ ಕದನದಲ್ಲಿ (1658-59) ಇವನು ಕೊಲ್ಲಲ್ಪಟ್ಟನೆಂದೂ ಹೇಳಿದ್ದಾನೆ. 		
	(ಆರ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ